Friday, March 30, 2012

ಚಿಗುರು ಮನಸು (ನವಿಲು ಗರಿ)

ನವಿಲು ಗರಿ...
                    ಆಗಷ್ಟೆ  ಪೂರ್ವದಲ್ಲಿ  ಸೂರ್ಯದೇವ ತನ್ನ ದಿನಚರಿ ಆರಂಬಿಸಿದ್ದ.. ಮುಂಜಾನೆಯ ಇಬ್ಬನಿ ಮಂಜು ಕರಗುತಿತ್ತು .. ಆಗಷ್ಟೆ  ಎದ್ದು ಅಮ್ಮನನ್ನ ಹುಡುಕಿ ಹೊರ ಬಂದ ಪುಟ್ಟನಿಗೆ ಆಶ್ಚರ್ಯವೊಂದು ಕಾದಿತ್ತು.. ಮನೆ ಮುಂದಿನ ವಿಶಾಲ ಅಂಗಳದಲ್ಲಿ ಕಾಡಿನ ಅತಿಥಿಯೊಬ್ಬರು ಬಂದಿದ್ದರು..  ಚುಮು ಚುಮು ಮುಂಜಿನ ನಡುವೆ ಕಂಡ ಆ ಆಕ್ರತಿ ಪುಟ್ಟನಿಗೆ ಎಲ್ಲಿಲ್ಲದ ಹರುಷ ತಂದಿತ್ತು..
                 " ಅಪ್ಪಯ್ಯ , ಅಪ್ಪಯ್ಯ ....ಯಮ್ಮನಿಗೆ ನವಿಲು ಬಂದಿದ್ದು... ಎನ್ಕೆ ಅದು ಬೇಕು.... ಹಿಡ್ಕೊಡು...ನಾನು ಅದ್ರ ಸಂಗತ ಆಡ್ತೆ... ಹಿಡ್ಕೊಡು ಅಪ್ಪಯ್ಯ"
                ಪುಟ್ಟನ  ಕೂಗನ್ನ ಕೇಳಿದ ಅನಂತ ಭಟ್ರು  "ಏನಾಯ್ತ ತಮ್ಮ, ಎಂಥ ಹಿಡ್ಕೊಡ್ಬೇಕ ನಿಂಗೆ ?" ಎಂದು ಕೇಳುತ್ತ ಹೊರಬಂದರು. ತಮ್ಮ ಅಂಗಳದಲ್ಲೇ ಓಡಾಡುತಿದ್ದ ನವಿಲನ್ನ ಕಂಡರು ಅಷ್ಟೇನು ಆಶ್ಚರ್ಯ ಚಕಿತರಾಗದೆ  "ಯವಗ್ಗು ಅದು ಬತ್ತು , ನೀ  ಅದನ್ನ ನೋಡಿದಿಲ್ಯೇ  "ಎಂದರು.
                ಆದರು ಹಠ ಬಿಡದ ಪುಟ್ಟ "ನಂಗ ಅದು ಬೇಕು, ನನ್ನ ಸಂತಿಗೆ ಆಟಾದ್ಲು ಯಾರು ಇಲ್ಲೇ , ನಾ ಅದ್ರ ನನ್ನ ಗೆಳೆಯನ್ನ ಮಾಡ್ಕಂತೆ, ಹಿಡ್ಕೊದು ಅಪ್ಪಯ್ಯ  " ಎಂದು ಅಜ್ಜನ ಪಿಡಿಸ ತೊಡಗಿದ.
           "ಅದನ್ನ ಹಿಡ್ಕನ್ದೊಗಿ ನಾಗಿ ಮನೆ ಕೋಳಿ ಗುಡ್ನಾಗೆ  ಬಿಟ್ಟು ಸಾಕುವ  ಅಪ್ಪಯ್ಯ  "
               ಪುಟ್ಟನ ಹಟವ ಕಂಡ ಅನಂತ್ ಭಟ್ಟರು ಅವನ ಸಮಾದಾನ ಪಡಿಸೋಕೆ ಹರ ಸಾಹಸ ಪಟ್ಟರು. ಕೊನೆಗೆ  " ತಮ್ಮಣ್ಣ, ನವಿಲ ಹಕ್ಕಿ ದೇವರ ವಾಹನ, ಅದನ್ನ ಹಿಡದ್ರೆ ಸುಬ್ಬಣ್ಣ ಶಾಪ ಕೊಡ್ತಾ " ಎಂದರು .
                ಅರೆ ಮನಸಿನಿಂದ ಅದನ್ನ ಒಪ್ಪಿ ಕಾಡಿನ ಕಡೆಯಲ್ಲಿ ಮರೆ ಯಾಗುತಿದ್ದ ನವಿಲನ್ನ ಕಂಡು ಬಿಕ್ಕಿ ಬಿಕ್ಕಿ ಅತ್ತು.. ಅಮ್ಮನ ಸೆರಗು ಸೇರಿ ಕೊಂಡ.
                ಮನೆ ಕೆಲಸದ ಸುಬ್ಬಿ ಇದನ್ನೆಲ್ಲಾ ದೂರದಿಂದಲೇ ನೋಡಿ "ನಮ್ಮ ಪುಟ್ಟಪ್ಪಂಗೆ  ನವಿಲ ಸಂತಿಗೆ ಆಡು ಆಸೆ ಅಂತೆ.
ಪಾಪ ತೀಡಿ ತೀಡಿ ಮುಖ ಎಲ್ಲವ ಕೆಮ್ಪಗಾಗೊಗದೆ " ಎಂದು ಗೊಣಗುತ್ತಲೇ ಅಂಗಳವನ್ನು ಗುಡಿಸೋಕೆ ಮುಂದಾದಳು.
               ಗುಡಿಸುತ್ತಿರುವಾಗ ಇದ್ದಕಿದ್ದಂತೆ "ಪುಟ್ಟಪ್ಪ ಪುಟ್ಟಪ್ಪ " ಎಂದು ಕೂಗ ತೊಡಗಿದಳು .
    ಆಶ್ಚರ್ಯದಿಂದಲೇ ಹೊರಗೋಡಿ ಬಂದ ಪುಟ್ಟನಿಗೆ ಸುಬ್ಬಿ ಕೈಯಲ್ಲಿದ್ದ ವಸ್ತುವನ್ನ ಕಂಡು ಖುಶಿ ಇಂದ ಕುಣಿದು ಕುಪ್ಪಳಿಸಿದ...
ಸುಬ್ಬಿ "ಪುಟ್ಟಪ್ಪ , ನವಿಲು ನಿಮಗೆ ಬಹುಮಾನ ಕೊಟ್ಟದೇ, "  ಎಂದು ಹೇಳಿ ನವಿಲು ಗರಿಯನ್ನ ಪುಟ್ಟನ ಕೈ ಗಿತ್ತಳು...
ಅದನ್ನ  ಹಿಡ್ಕೊಂಡು ಒಂದೇ ಓಟದಲ್ಲಿ ಅಮ್ಮನ ಮುಂದೆ ಪ್ರತ್ಯಕ್ಷನಾದ "ಆಯಿ, ಇಲ್ನೋದೆ ನಂಗೆ ನವಿಲು ಬಹುಮಾನ ಕೊಟ್ಟಿದ್ದು " ಎಂದು ನವಿಲು ಗರಿಯನ್ನು ಅಮ್ಮನಿಗೆ ತೋರಿಸ ತೊಡಗಿದ.
               ಅಮ್ಮಾ  "ಅದನ್ನ ಜೋಪನವಗೆ ಇಟ್ಕೊಳವು" ಎಂದಳು ..
          ಅಂದು ಬೆಳಗಿನಿಂದ ಸಂಜೆಯ ವರೆಗೆ ಒಂದು ಕ್ಷಣವೂ ಆ ಗರಿ ಇಂದ ದುರಾಗದ ಪುಟ್ಟ. ಕೃಷ್ಣನಂತೆ ತಾನು ತಲೆಗೆ  ಅದನ್ನ ಕಟ್ಟಿ ಕೊಂಡು ಕುಣಿದಾಡಿದನು.ಮನೆಗೆ ಬಂದವರಿಗೆಲ್ಲ ಅದನ್ನ ತೋರಿಸಿ ಖುಶಿ ಪಟ್ಟಿದ್ದನು .
            ಆ ಸುಂದರವಾದ ನವಿಲು ಗರಿ ಪುಟ್ಟನ ಕಣ್ಣಲ್ಲಿ  ನೂರಾರು ಸುಂದರ ಚಿತ್ರಗಳನ್ನೂ ಮುಡಿಸುತಿದ್ದವು.. ಅದು ನಮ್ಪುಟ್ಟನಿಗೆ ಬರಿ ನವಿಲು ಗರಿಯಾಗಿರಲಿಲ್ಲ ಕಲ್ಪನೆಯ ಲೋಕದಲ್ಲಿ ಅವನನ್ನು ತೆಲಿಸುತಿದ್ದ ಮಾಯಾ ದಂಡವಾಗಿತ್ತು. ಮಲಗುವಾಗ  ಕೂಡಾ ಅದನ್ನ ತನ್ನ ಪಕ್ಕದಲ್ಲೇ ಪುಟ್ಟ ಮಗುವಿನಂತೆ ಮಲಗಿಸಿಕೊಂಡು  ಅದರಲ್ಲಿನ ಸಾವಿರ ಬಣ್ಣಗಳಿ೦ದ ಮನದ ಪಟದ ಮೇಲೆ ಸುಂದರ ಚಿತ್ರಗಳನ್ನ ಬಿಡಿಸಿಕೊಳ್ಳುತ್ತಾ  ಅಮ್ಮನ ಮಡಿಲಿಂದ ನಿದ್ರಾದೇವತೆಯ ಮಡಿಲಿಗೆ ಜಾರಿದ್ದ..


ಚಿಗುರು ಮನಸು (ಮಳೆಗಾಲದ ಒಂದು ದಿನ )

 ಮಳೆಗಾಲದ ಒಂದು ದಿನ     
                    ಕೋಳಿ ಕೂಗಿ ಸಾಕಷ್ಟು  ಹೊತ್ತಾದರೂ ಸೂರ್ಯ ದೇವನ ದರ್ಶನ ವಾಗಿರಲಿಲ್ಲ. ಕಾರಣ ಅದು ಮಲೆನಾಡಲ್ಲಿ ಮಳೆಗಾಲದ ಸಮಯ. ರಾತ್ರಿ ಇಂದ ಸುರಿಯುತ್ತಿರುವ ದಾರಕಾರ ಮಳೆಗೇ ಮುರಿದು ಬಿದ್ದ ಅಡಿಕೆ ಮರಗಳನ್ನ ಹಿತ್ತಿಲ ಬಾಗಿಲಲ್ಲೇ ನಿಂತು ನೋಡಿ ಮರುಕ ಪಟ್ಟ ಅನಂತ ಭಟ್ಟರು "ಹಾಲ್ಬಿದ್ದ ಮಳೆ ಬಂದು ಇ ಸಲದ ಬೆಳೆ ಎಲ್ಲ ಹಾಳಾತ್ತು" ಎಂದು ಮಳೆ ಗೆ ಹಿಡಿ ಶಾಪ ಹಾಕುತ್ತ ಕೊಟ್ಟಿಗೆಯ ಕಡೆಗೆ ದನಗಳನ್ನ ನೋಡಿ ಬರಲು ಹೊರಟರು.
      ಬೆಚ್ಚನೆ ಕೋಣೆಯಲ್ಲಿ ಅಮ್ಮನ ಮಡಿಲಲ್ಲಿ ಮಲಗಿದ್ದ ಪುಟ್ಟನಿಗೆ ಬೆಳಗಾಗಿದ್ದು ಗೊತ್ತಾಗಿದ್ದು ಗುಡುಗಿನ ಗರ್ಜನೆಯಿಂದ. ಹೆದರಿಕೆಯಿಂದಲೇ  ಹೊದ್ದುಕೊಂಡಿದ್ದ ಮುಸುಕನ್ನು ಜಾರಿಸಿ ಕಿಟಕಿಯ ಕಡೆಗೆ ಮೂಖ ಮಾಡಿದ್ದ.  ತನ್ನ ಪಕ್ಕದಲ್ಲಿ ಅಮ್ಮನಿಲ್ಲವೆಂಬುದ ಅರಿತು ಹೆದರಿಕೆ ಯೆಂದಲೇ ಅಮ್ಮನ ಹುಡುಕ ಹೊರಟ.
                        ಪುಟ್ಟ ಜಯಲಕ್ಷ್ಮಮ್ಮ ಮತ್ತು ಕಾಂತು ಬಟ್ಟರ ಒಬ್ಬನೇ ಮಗ. ಅನಂತ ಭಟ್ಟರ ಮೊಮ್ಮಗ. ನಮ್ಮ ಪುಟ್ಟನಿಗೆ ಈಗ ವರ್ಷ. ಮಲೆನಾಡಿನ ಪುಟ್ಟ ಹಳ್ಳಿ ಇವನ ಊರು. ಅಮ್ಮನ ಬಿಟ್ಟು ಬೇರೆ ಪ್ರಪಂಚವೇ ಅರಿಯದ ನಮ್ಮ ಪುಟಾಣಿಗೆ ಅಮ್ಮನೇ ಎಲ್ಲಾ.
                      ಅನಂತ ಬಟ್ರು ಜಯಲಕ್ಷ್ಮಮ್ಮನವರ ಕರೆದು "ದನಗಳಗೆ ಆಸರ ಕೊಟ್ಯೇನೆ, ಆಗ್ಲಿಂದ ಅರ್ಚಕೊಳ್ತಿದ್ದು. ಅವಕ್ಕೆಲ್ಲ ಅಸರ್ ಹ್ಯಾಕಿ  ಹಾಲು ಕರ್ಕಂದು ಬಾ ಮಗಳೇ " ಎಂದರು. ಅದನ್ನ ಕೇಳಿ ಲಕ್ಷ್ಮಮ್ಮ ಕೊಟ್ಟಿಗೆ ಕಡೆಗೆ ಹೊರಟರು.
ಇತ್ತ ನಮ್ಮ ಪುಟ್ಟನಿಗೆ ಅಮ್ಮನ ಕಾಣದೆ ಗಾಬರಿ ಇಂದ ಮನೆಯೆಲ್ಲ ಓಡಾಡುತಿದ್ದ. ಆಗಾಗ ಕಿವಿಗರಚುತಿದ್ದ ಸಿಡಿಲಿನ ಶಬ್ದಕ್ಕೆ ಹೆದರಿ ಮನೆಯ ಮುಮ್ಬಾಗಿಲಿನ ಸಂದಿಯಲ್ಲಿ ಅವಿತುಕೊಂಡು ಹೊರಗಡೆ ಇಣುಕಿ ನೋಡ ತೊಡಗಿದ. ಮನೆಯ ಮಾಡಿನಿಂದ ಬಿಳುತಿದ್ದ ಮಳೆ ನೀರಿನ ನಡುವೆ ಕಾಣಿಸುತಿದ್ದ ಅಸ್ಪಸ್ಟ ಆಕ್ರತಿ ತನ್ನ ಅಜ್ಜನದು ಎಂದರಿಯಲು ಅವನಿಗೆ ಜಾಸ್ತಿ ಸಮಯ ಹಿಡಿಯಲಿಲ್ಲ. ಆಗತಾನೆ ಕೊಟ್ಟಿಗೆ ಕಡೆ ಇಂದ ಬಂದ ಭಟ್ಟರಿಗೆ ಮೊಮ್ಮಗನ ನೋಡಿ ಮಾತನಾಡಿಸ ತೊಡಗಿದರು
                       "ತಮ್ಮ , ಜಾಯಿ ಕುಡದ್ಯಾ, ಬಾಗಲ ಸಂದಿಲಿ ಎಂಥ ಮಾಡ್ತಿದ್ಯ, ಬ್ಯಾಗೇ ಹೋಗಿ ಆಸರ ಕುಡಿ ಹೋಗು  " ಅಂದರು.
            ಪುಟ್ಟ "ಅಪ್ಪಯ್ಯ ಆಯಿಯೆಲ್ಲಗೆ ಹೋಗಿದ್ದು" .
                     " ಆಯಿ ಕೊಟ್ಟಿಗೆಗೆ ಹಾಲು ಕರಿಲು ಹೋಗಿದ್ದು, ನೀನು ಅವ್ವ ಎನು  ಮಾಡ್ತಿದ್ಲು ನೋಡು ಹೋಗು ಮಗ " ಎಂದು ಪ್ರೀತಿ ಇಂದಲೇ  ಹೇಳಿದರು . ಇದನ್ನು ಕೇಳಿದ ಪುಟ್ಟ ಅಡುಗೆ ಮನೆ ಕಡೆ ಓಡಿದ.
                     ಅವ್ವ ಪುಟ್ಟ ನ ಅಜ್ಜಿ.  ಆಗಲೇ  ಬೆಳಗಿನ ಉಪಹಾರವನ್ನೂ ಸಿದ್ದಗೊಳಿಸುತಿದ್ದ ಅಜ್ಜಿಯ ಕಂಡು "ಅವ್ವ ಎಂಥ ಮಾಡ್ತಿದ್ದೆ " ಎಂದ.
                    ಮೊಮ್ಮಗನ ಮುದ್ದು ಮಾತನ್ನು ಕೇಳಿ ಪುಟ್ಟನೆಡೆಗೆ ತಿರುಗಿದ ಅವ್ವ "ಅಪ್ಪಿ ಸುಡ್ತ್ಹಿದ್ದೆ ಮಗ, ಜಾಯಿ ಕೊಡ್ತೆ, ಬೇಗ ಹೋಗಿ ಮೊರೆ ತೊಲ್ಕಂಡು ಬಾ " ಎಂದರು .
                    ಅಸ್ಟು ಹೊತ್ತಿಗೆ  ಹಾಲು ಕರೆದುಕೊಂಡು ಕೊಟ್ಟಿಗೆ ಕಡೆಯಿಂದ ಬಂದ ಜಯಲಕ್ಷ್ಮಮ್ಮ ಮಗನ ಕಂಡು "ಈಗ ಎದ್ಯ, ಬಾ ಮೊರೆ ತೊಲ್ಸ್ಕೊಡ್ತೆ," ಎಂದು ಪುಟ್ಟಣ ಕೈ ಹಿಡಿದು ಬಚ್ಚಲ ಮನೆ ಕಡೆ ಹೊರಟರು..
                      ಆಗಲೇ ಮಳೆಯ ಆರ್ಬಟ ಕೂಡ ಕೊಂಚ ಕಡಿಮೆಯಾಗಿತ್ತು.. ತೋಟದಲ್ಲಿ ಹಿಂದಿನ ರಾತ್ರಿ ಆದ ಅನಾಹುತ ಗಳ ನೋಡಿ ಬರಲು ಕಾಂತು ಭಟ್ರು ತೋಟದ ಕಡೆಗೆ ಹೊರಟರು...
                      ಅಮ್ಮ ಕೊಟ್ಟ ಹಾಲಿನ ಲೋಟ ಹಿಡಿದು ಮನೆಯ  ಹೊಳ್ಳಿಯ ಮೇಲೆ ಬಂದು ಕುಳಿತ ನಮ್ಮ ಪುಟ್ಟ..
        ಆಗಲೇ ಸೂರ್ಯ ದೇವನು ಮೋಡಗಳ ಮರೆಯಿಂದ ಹೊಂಗಿರಣ ಸುಸುತಿದ್ದ. ಮನೆಯ ಮುಂದಿನ ಗುಲಾಬಿ ಗಿಡದ ಮೇಲೆ ಮುತ್ತಿನಂತೆ ತೋರುತಿದ್ದ ಮಳೆ ಹನಿಗಳನ್ನು ನೋಡುತ್ತಾ ಪುಟ್ಟ ಹಾಲನ್ನು ಹಿರತೋಡಗಿದ. ಮನೆ ಮುಂದೆ ಕಾಣುತಿದ್ದ ವಿಶಾಲ ಗುಡ್ಡ ಬೆಟ್ಟಗಳು  ಸೂರ್ಯನ ಕಿರಣಗಳಿಂದ ಚಿನ್ನದ ಲೇಪನ ಮಾಡಿದ ಹಾಗೆ ಕಾಣುತಿದ್ದವು. ಅಜ್ಜ ಹೇಳುತಿದ್ದ ಕಥೆಗಳಲ್ಲಿ ಬರುವ ಹುಲಿಯಣ್ಣ ಇದೆ ಬೆಟ್ಟದಿಂದ ಬಂದವನಿರಬೇಕು ಎಂದು ಯೋಚಿಸತೊಡಗಿದ. ಆಗಾಗ್ಗೆ ಕೇಳುತಿದ್ದ ನವಿಲುಗಳ ಕೂಗು. ಮನೆಯ ಮಾಡಿನಿಂದ ಟಾಪ್ ಟಾಪ್  ಎಂದು ಬಿಳುತಿದ್ದ ಮಳೆ ಹನಿ . ಆಗಾಗೆ ಬಿಸುತಿದ್ದ ಗಾಳಿಗೆ ತಲೆಯಡಿಸುತಿದ್ದ ಮರಗಳು.. ಎಲ್ಲದಕಿಂತ ಹೆಚ್ಚಾಗಿ ತಂಪಾಗಿದ್ದ ವಾತಾವರಣ ನಮ್ಮ ಪುಟ್ಟನ  ಕಲ್ಪನೆಯಲ್ಲಿ  ಕೃಷ್ಣನ ಕಥೆಯ ಬ್ರಿನ್ದಾವನವೇ ಆಗಿತ್ತು.
                     ಯಾವ ಕಲ್ಮಶವು ಅರಿಯದ ಪುಟ್ಟ ಮನಸು ಅದು. ತನ್ನ ಕಲ್ಪನೆಯೇ ನಿಜ ಎಂದು ನಂಬುವ ಪುಟಾಣಿಗೆ ಅಜ್ಜ ಹೇಳುವ ಕಥೆಗಳು ಯಾವ ಫ್ಯಾಂಟಸಿಗು ಕಡಿಮೆ ಇರಲಿಲ್ಲ. ಎಲ್ಲಾ ಕಥೆಗಳಲ್ಲೂ ಬರುವ ಧೈರ್ಯವಂತ ರಾಜಕುಮಾರ ನಾನೇ ಎಂದು ಕೊಳ್ಳುತಿದ್ದ ಪುಟ್ಟ, ಜೋರಾಗಿ ಇನ್ನೊಮ್ಮೆ ಗುಡಿಗಿದಾಗ ಓಡಿಹೋಗಿ ಅಮ್ಮನ ಸೀರೆಯ ಸೆರಗಲ್ಲಿ ಬಚ್ಚಿಟ್ಟುಕೊಂಡಿದ್ದು  ಮಾತ್ರ ಅಷ್ಟೇ ನಿಜ.....